Natural Rat Control Methods – ರೈತರೇ ಇಲಿ ಕಾಟಕ್ಕೆ ಇಲ್ಲಿದೆ ಸುಲಭ ಪರಿಹಾರ

Spread the love

ಇಲಿ ಪಾಷಾಣದ ಬದಲು ಕಡಿಮೆ ಖರ್ಚಿನ ಈ ಕೆಲವು ತಂತ್ರಗಳನ್ನು (Natural Rat Control Methods) ಅರಿತುಕೊಂಡರೆ ಅನಗತ್ಯ ಆರ್ಥಿಕ ಹೊರೆ ತಗ್ಗಿಸಿ, ಸಾಕು ಪ್ರಾಣಿಗಳ ಸಾವನ್ನೂ ತಪ್ಪಿಸಬಹುದು. ಅಂತಹ ಒಂದಷ್ಟು ವಿಧಾನಗಳು ಇಲ್ಲಿವೆ…

ರೈತರಿಗೆ ಇಲಿ ಕಾಟ ಸಾಮಾನ್ಯ. ಬಿತ್ತನೆಯಿಂದ ಹಿಡಿದು ಕೊಯ್ಲು ಮಾಡಿ ಮಾರುಕಟ್ಟೆಗೆ ಕೊಂಡೊಯ್ಯುವ ತನಕ ಒಂದಿಲ್ಲೊಂದು ರೀತಿಯಲ್ಲಿ ಮೂಷಿಕ ಪೀಡೆಗೆ ರೈತರು ಕಂಗಾಲಾಗುವುದುಂಟು. ಒಮ್ಮೊಮ್ಮೆ ಇವು ಮಾಡುವ ಹಾನಿ ಭಾರೀ ದುಬಾರಿ.

WhatsApp Group Join Now
Telegram Group Join Now

ವಿಶೇಷವಾಗಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಕೈಗೆ ಬಂದ ಫಸಲನ್ನು ಕೊಯ್ಲು ಮಾಡಿ ಹೊಲದಲ್ಲಿಯೇ ಬಣವೆ ಹಾಕಿ ಸಂಗ್ರಹಿಸುವುದುಂಟು. ಅನುಕೂಲ ಇರುವಂಥವರು ಇಲಿ-ಹೆಗ್ಗಣಗಳಿಂದ ಸಂರಕ್ಷಿಸಲು ವಿವಿಧ ಆಧುನಿಕ ವಿಧಾನಗಳನ್ನು ಅನುಸರಿಸಬಹುದು.

ಆದರೆ ಮಳೆಯಾಶ್ರಿತ ಪ್ರದೇಶದಲ್ಲಿ ಹೀಗೆ ಆಧುನಿಕ ವಿಧಾನಗಳ ಮೂಲಕ ಫಸಲು ಸಂರಕ್ಷಿಸುವಷ್ಟು ಅನುಕೂಲವುಳ್ಳ ರೈತರು ಬಹಳ ಕಮ್ಮಿ. ಹೀಗಾಗಿ ಅವರು ಬಂದ ಫಸಲನ್ನು ಕೊಯ್ಲು ಮಾಡಿ ಕೆಲವು ಕಾಲ ಹೊಲದಲ್ಲಿಯೇ ಎತ್ತರದ ಪ್ರದೇಶದಲ್ಲಿ ಬಣವೆ ಹಾಕಿ ಸಂಗ್ರಹಿಸುತ್ತಾರೆ. ಇದು ಇಲಿಗಳಿಗೆ ಹಬ್ಬವಾಗಿ ಪರಿಣಮಿಸುತ್ತದೆ. ಕಷ್ಟಪಟ್ಟು ಬೆಳೆದ ಬೆಳೆ ಬಹುತೇಕ ಇಲಿಗಳ ಆಹಾರವಾಗುವ ಅಪಾಯವಿರುತ್ತದೆ.

ಹೀಗಾಗಿ ಇಲಿ ನಿಯಂತ್ರಣಕ್ಕೆ ರೈತರು ಪಾಷಾಣ ಇಡುವ ವಿಧಾನ ಅನುಸರಿಸುತ್ತಾರೆ. ಇದರಿಂದ ತಕ್ಕ ಮಟ್ಟಿಗೆ ಇಲಿ ನಿಯಂತ್ರಣವಾಗಬಹುದು. ಆದರೆ ಇಲಿಗಳು ಅತ್ಯಂತ ಅನುಮಾನದ ಪ್ರಾಣಿಗಳಾಗಿದ್ದು; ಪಾಷಾಣದ ವಾಸನೆಯನ್ನು ಬಹುಬೇಗ ಪತ್ತೆ ಮಾಡಿಬಿಡುತ್ತವೆ. ಅನೇಕ ಬಾರಿ ಇಲಿ ನಿಯಂತ್ರಣಕ್ಕೆ ಇಟ್ಟ ಪಾಷಾಣ ಇಲಿಗಳ ಬದಲಾಗಿ ಇತರ ಸಾಕು ಪ್ರಾಣಿಗಳ ಜೀವಕ್ಕೆ ಕಂಟಕವಾಗುವ ಅಪಾಯವೇ ಹೆಚ್ಚು.

ಹೀಗಾಗಿ ಇಲಿಗಳನ್ನು ನಿಯಂತ್ರಣಕ್ಕೆ ಪಾಷಾಣದಂತಹ ಅಪಾಯಕಾರಿ ವಿಧಾನಗಳಿಗಿಂತ ಜೈವಿಕ, ಸಾಂಪ್ರದಾಯಿಕ ವಿಧಾನಗಳು ಉತ್ತಮ. ಕಡಿಮೆ ಖರ್ಚಿನ ಈ ತಂತ್ರಗಳನ್ನು ಅರಿತುಕೊಂಡರೆ ಅನಗತ್ಯ ಆರ್ಥಿಕ ಹೊರೆ ತಗ್ಗಿಸಿ, ಸಾಕು ಪ್ರಾಣಿಗಳ ಸಾವನ್ನೂ ತಪ್ಪಿಸಬಹುದು.

ಇದನ್ನೂ ಓದಿ: Rural Postal Life Insurance RPLI – ಗ್ರಾಮೀಣ ಜನರಿಗಾಗಿ ಇರುವ ಬಂಪರ್ ಪೋಸ್ಟಾಫೀಸ್ ಸ್ಕೀಮ್ | ₹1500 ಹೂಡಿಕೆ ಮಾಡಿ ₹35 ಲಕ್ಷ ಪಡೆಯಿರಿ…

ಗ್ಲಿರಿಸೀಡಿಯಾ ಗಿಡದ ಸೊಪ್ಪು

ಇಲಿ ನಿಯಂತ್ರಣಕ್ಕೆ ಗ್ಲಿರಿಸೀಡಿಯಾ ಗಿಡ ಅತ್ಯಂತ ಪರಿಣಾಮಕಾರಿ. ಬೇಲಿ ಬದಿಯಲ್ಲಿ ಬೆಳೆಯುವ ಇದನ್ನು ಯಥೇಚ್ಛ ಸಸಾರಜನಕ ಹೊಂದಿರುವ ಕಾರಣಕ್ಕಾಗಿ ಗೊಬ್ಬರ ಗಿಡ ಎಂದು ಸಹ ಕರೆಯುತ್ತಾರೆ. ಈ ಸಸ್ಯವನ್ನು ಗ್ರೀಕ್‌ನ ಜನರು ಇಲಿ-ಹೆಗ್ಗಣಗಳನ್ನು ನಿಯಂತ್ರಿಸಲು ಬಳಸುತ್ತಿದ್ದರು. ಇದು ಇಲಿಗಳ ನಿಯಂತ್ರಣಕ್ಕೆ ಸಾಕಷ್ಟು ಹಳೇ ಕಾಲದಿಂದ ಬಳಕೆಯಲ್ಲಿರುವ ಜೈವಿಕ ವಿಧಾನ.

ಇಲಿಗಳ ಕಾಟ ಇರುವ ರೈತರು ಗ್ಲೆರಿಸಿಡಿಯಾ ಗಿಡದ ಎಲೆ, ತೊಗಟೆಯನ್ನು ಅನ್ನದ ಜತೆಗೆ ಚೆನ್ನಾಗಿ ಕುದಿಸಿ ನಾಲ್ಕು ದಿನಗಳ ಕಾಲ ಪಾತ್ರೆಯಲ್ಲಿ ಭದ್ರವಾಗಿ ಮುಚ್ಚಿಡಬೇಕು. 1 ಕೆ.ಜಿ ಅಕ್ಕಿಯೊಂದಿಗೆ 250 ಗ್ರಾಂ ಗ್ಲಿರಿಸಿಡಿಯಾ ತೊಗಟೆಯನ್ನು ಬಳಕೆ ಮಾಡಬಹುದು. ಸೊಪ್ಪನ್ನು ಚೆನ್ನಾಗಿ ಅರೆದು ಕೂಡ ಅನ್ನದಲ್ಲಿ ಬೆರೆಸಬಹುದು. ಒಂದೆರಡು ದಿನಗಳಲ್ಲಿಯೇ ಇದರಿಂದ ಹಳಸಲು ವಾಸನೆ ಬರಲು ಪ್ರಾರಂಭವಾಗುತ್ತದೆ.

ಬಳಿಕ ಈ ಮಿಶ್ರಣವನ್ನು ಉಂಡೆಗಳನ್ನಾಗಿ ಮಾಡಿ ಇಲಿ ಹೆಗ್ಗಣಗಳ ಬಿಲಗಳ ಬಳಿ ಅಥವಾ ಅವುಗಳು ಓಡಾಡುವ ದಾರಿಯಲ್ಲಿ ಇಟ್ಟರೆ ಸಾಕು. ಇಲಿಗಳ ಹೊರತು ಬೆಕ್ಕು, ನಾಯಿಯಂತಹ ಇತರೆ ಸಾಕು ಪ್ರಾಣಿಗಳಿಗೆ ಇದರಿಂದ ಯಾವುದೇ ಅಪಾಯವಿಲ್ಲ. ಗ್ಲಿರಿಸೀಡಿಯಾ ಮಿಶ್ರಿತ ಆಹಾರ ಸೇವಿಸುವುದರಿಂದ ಸಾಯುವ ಜೀವಿಗಳೆಂದರೆ ಇಲಿ-ಹೆಗ್ಗಣ, ಅಳಿಲುಗಳು ಮಾತ್ರ.

ಇದನ್ನೂ ಓದಿ: B.Ed Vishesha Protsahadhana Yojana- ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ | ಹಾವೇರಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ₹25,000 ಆರ್ಥಿಕ ನೆರವು

ಎಣ್ಣೆಯಲ್ಲಿ ಅದ್ದಿದ ಹತ್ತಿ ಅರಳೆ ಮದ್ದು

ಅದೇ ರೀತಿ ದೀಪದ ಬತ್ತಿಗೆ ಬಳಕೆ ಮಾಡುವ ಹತ್ತಿ ಅರಳೆ ಕೂಡ ಇಲಿಗಳ ಪಾಲಿಗೆ ಕಂಟಕವಾಗಿ ಕೆಲಸ ಮಾಡಬಲ್ಲದು. ಶೇಂಗಾ ಅಥವಾ ತೆಂಗಿನೆಣ್ಣೆಯಲ್ಲಿ ಅದ್ದಿದ ಹತ್ತಿ ಅರಳೆಯನ್ನು ಇಲಿಗಳು ಓಡಾಡುವ ಜಾಗದಲ್ಲಿ ಇಟ್ಟರೆ ಸಾಕು. ಎಣ್ಣೆಯ ಸುವಾಸನೆಗೆ ಓಡಿ ಬರುವ ಇಲಿಗಳು ಹತ್ತಿ ಅರಳೆಯನ್ನು ಗಬಗಬನೆ ತಿನ್ನುತ್ತವೆ.

ಹತ್ತಿ ಅರಳೆ ತಿಂದ ಇಲಿಯ ಜೀರ್ಣಾಂಗ ವ್ಯೂಹ ಬ್ಲಾಕ್ ಆಗಿ ಇಲಿ ಅಲ್ಲಿಂದ ಪರಾರಿಯಾಗುತ್ತದೆ. ಮಾತ್ರವಲ್ಲ ಸ್ವಲ್ಪ ಸಮಯದ ಬಳಿಕ ಸಾಯುತ್ತದೆ. ಆದರೆ ಗ್ಲಿರಿಸೀಡಿಯಾ ಸೊಪ್ಪು ಮಿಶ್ರಿತ ಅನ್ನದ ಉಂಡೆಯಂತೆಯೇ ಹತ್ತಿ ಅರಳೆ ತಿಂದ ಇಲಿಗಳು ಆ ಪ್ರದೇಶದಲ್ಲೇ ಸಾಯಬೇಕೆಂದೇನಿಲ್ಲ. ಸ್ಥಳದಿಂದ ಸ್ವಲ್ಪ ದೂರದ ಪ್ರದೇಶದಲ್ಲಿ ಸಾವನ್ನಪ್ಪುತ್ತವೆ.

Natural Rat Control Methods
Natural Rat Control Methods
ಸುಟ್ಟ ಸುಣ್ಣದ ಬಳಕೆ

ಹಾಗೇನೇ ಸುಟ್ಟ ಸುಣ್ಣವನ್ನು ಚೆನ್ನಾಗಿ ಪುಡಿ ಮಾಡಿ ಕಡ್ಲೆ ಹಿಟ್ಟು, ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಇಲಿಗೆ ನೀಡುವ ಮೂಲಕವೂ ಸುಲಭವಾಗಿ ಮೂಷಕ ಸಂಹಾರ ಮಾಡಬಹುದು. ಈ ಮಿಶ್ರಣವನ್ನು ತಿಂದಾಗ ಇಲಿಯ ಹೊಟ್ಟೆಗೆ ಸೇರುವ ಸುಣ್ಣ ಅರಳಿ ಶಾಖವನ್ನು ಬಿಡುಗಡೆಗೊಳಿಸುತ್ತದೆ.

ಇದರಿಂದ ಇಲಿಯ ಹೊಟ್ಟೆಯು ಉಬ್ಬಿ ಸಾಯುತ್ತದೆ ಆರಂಭಿಸುತ್ತದೆ. ಇನ್ನು ಚರ್ಮಕ್ಕೆ ಅಲರ್ಜಿ ಉಂಟು ಮಾಡುವ ನಸುಗುನ್ನಿ ಗಿಡದ ಪರಿಚಯ ರೈತರಿಗೆ ಸಾಮಾನ್ಯವಾಗಿ ಇರುತ್ತದೆ.

ಇದನ್ನೂ ಓದಿ: Free Sewing Machine- ಹಾವೇರಿ ಜಿಲ್ಲೆ: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ

ನಸುಗುನ್ನಿ ಗಿಡದ ಮದ್ದು

ಇಲಿಗಳ ಕಾಟಕ್ಕೆ ನಸುಗುನ್ನಿ ಗಿಡ ಕೂಡ ರಾಮಬಾಣದಂತಿದೆ. ಈ ಗಿಡದ ಕಾಯಿಯನ್ನು ತಂದು ಇಲಿಯ ಬಿಲದ ಹತ್ತಿರ ಇಡಬೇಕು. ನಸುಗುನ್ನಿ ಕಾಯಿಯ ರೋಮ ತಾಗಿದ ಕೂಡಲೇ ಅದು ಇಲಿಗೆ ತುರಿಕೆ ಉಂಟು ಮಾಡುತ್ತದೆ.

ತುರಿಕೆಯ ಕಾಟ ತಾಳಲಾರದ ಇಲಿ, ಇತರೆ ಇಲಿಗಳನ್ನು ಕಚ್ಚುತ್ತಾ ಅಲ್ಲಿಂದ ಪಲಾಯನ ಮಾಡುತ್ತದೆ. ಇದರಿಂದ ಇಲಿಗಳು ಪರಸ್ಪರ ಕಾದಾಟ ನಡೆಸುವುದರಿಂದ ಆ ಜಾಗದಲ್ಲಿ ಸಾಕಷ್ಟು ಸಂಖ್ಯೆಯ ಇಲಿಗಳು ಸಾಯುತ್ತವೆ.

ಇಲಿಗಳ ನಿಯಂತ್ರಣಕ್ಕಾಗಿ ರೈತರು ಕೇವಲ ವಿಷ-ಪ್ರಾಷಣದಂತಹ ಒಂದೇ ಮಾರ್ಗ ಅವಲಂಬಿಸುವ ಬದಲು ಇಂತಹ ಸುಲಭದ ಪ್ರಯೋಗಗಳನ್ನು ಜಾಣ್ಮೆಯಿಂದ ಜಾರಿಗೊಳಿಸಿದರೆ, ಜೈವಿಕವಾಗಿ ಇಲಿಗಳ ಹಾವಳಿ ನಿಯಂತ್ರಿಸಬಹುದು. ಈ ಕ್ರಮಗಳನ್ನು ಉತ್ತರ ಕರ್ನಾಟಕದ ಹಲವು ರೈತರು ಅಳವಡಿಸಿ ನೋಡಿದ್ದಾರೆ.

ಕೆಲವು ಕಡೆ ಇಲಿಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ. ಆದರೆ ಪ್ರದೇಶವಾರು ಹವಾಗುಣ, ಮಣ್ಣು, ಬೆಳೆ ಪದ್ಧತಿ ಬದಲಾಗುತ್ತವೆ. ಹಾಗಾಗಿ ಈ ಕ್ರಮಗಳನ್ನು ಅನುಸರಿಸುವ ಅಥವಾ ಅಳವಡಿಸಿಕೊಳ್ಳುವ ಮುನ್ನ ರೈತರು ಕೃಷಿ ಇಲಾಖೆ ತಜ್ಞರ ಮಾರ್ಗದರ್ಶನ ಪಡೆದರೆ ಉತ್ತಮ


Spread the love
WhatsApp Group Join Now
Telegram Group Join Now

Leave a Comment