Haveri SP Yashoda Vantagodi- ಯುವ ಸ್ಫೂರ್ತಿ ಹಾವೇರಿ ಎಸ್ಪಿ ಯಶೋದಾ ವಂಟಗೋಡಿ

Spread the love

ಹಾವೇರಿ ಎಸ್ಪಿ ಯಶೋದಾ ವಂಟಗೋಡಿ (Haveri SP Yashoda Vantagodi) ಅವರ ಕಾರ್ಯ ವೈಖರಿಗೆ ಜಿಲ್ಲೆಯ ಜನರ ಮನ ಸೆಳೆದಿದೆ. ಯುವಸ್ಫೂರ್ತಿಯಾಗಿರುವ ಅವರ ಹಿನ್ನಲೆ ಕೂಡ ಅಷ್ಟೇ ಮಾದರಿಯಾಗಿದೆ…

ಹಾವೇರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‌ಪಿ) ನೇಮಕವಾದ ಕ್ಷಣದಿಂದಲೇ ಯಶೋದಾ ವಂಟಗೋಡಿ (Yashoda Vantagodi) ಅವರು ಜಿಲ್ಲೆಯ ಜನಮನ ಸೆಳೆದಿದ್ದಾರೆ. ಕೇವಲ ಐದಾರು ತಿಂಗಳ ಸೇವೆಯಲ್ಲೇ ತಮ್ಮ ದಕ್ಷತೆ, ಧೈರ್ಯ ಮತ್ತು ಸ್ಪಷ್ಟ ನಿರ್ಧಾರಗಳ ಮೂಲಕ ‘ಇವರು ವಿಭಿನ್ನ’ ಎಂಬ ಭಾವನೆ ಮೂಡಿಸಿದ್ದಾರೆ.

WhatsApp Group Join Now
Telegram Group Join Now

ಎರಡು ವರ್ಷಗಳ ಕಾಲ ಹಾವೇರಿ ಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದ ಅಂಶುಕುಮಾರ್ ಅವರ ನಂತರ, ಕಳೆದ ಜುಲೈ 15, 2025ರಂದು ಜಿಲ್ಲೆಯ ನೂತನ ಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ ಯಶೋದಾ ಅವರು, ಆರಂಭದಲ್ಲೇ ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ನಿಲುವು ತಾಳುವ ಮೂಲಕ ಗಮನ ಸೆಳೆದರು.

Haveri SP Yashoda Vantagodi
ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ

ಇದನ್ನೂ ಓದಿ: Gandhi Grama Puraskara Haveri- ಹಾವೇರಿ ಜಿಲ್ಲೆಯ ಎಂಟು ಗ್ರಾಮ ಪಂಚಾಯತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರ | ಗ್ರಾಮಾಭಿವೃದ್ಧಿಗೆ ಮಾದರಿಯಾದ ಜಿಲ್ಲೆ

ಅಕ್ರಮ ಕಸುಬುಗಳಿಗೆ ಕಡಿವಾಣ

ಹಾವೇರಿ ಜಿಲ್ಲೆಯಲ್ಲಿ ತಾಂಡವಾಡುತ್ತಿದ್ದ ಮಟ್ಕಾ, ಇಸ್ಪೀಟ್, ಅಕ್ರಮ ಮರಳು ದಂಧೆ ಸೇರಿದಂತೆ ಹಲವಾರು ಅಡ್ಡ ಕಸುಬುಗಳಿಗೆ ಶಕ್ತಿ ಮೀರಿ ಕಡಿವಾಣ ಹಾಕುವ ಪ್ರಯತ್ನ ಯಶೋದಾ ಅವರದ್ದು.

ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಕಾರ್ಯರೂಪದಲ್ಲಿ ತೋರಿಸುತ್ತಿರುವ ಇವರು, ಪೊಲೀಸ್ ಇಲಾಖೆಯ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಮತ್ತಷ್ಟು ಬಲಪಡಿಸುತ್ತಿದ್ದಾರೆ.

Haveri SP Yashoda Vantagodi
ಹಾವೇರಿ ಎಸ್ಪಿ ಯಶೋದಾ ವಂಟಗೋಡಿ
ಸರಕಾರಿ ಶಾಲೆಯಿಂದ ಐಪಿಎಸ್ ವರೆಗೆ

ಯಶೋದಾ ವಂಟಗೋಡಿ ಅವರ ಜೀವನ ಪಯಣವೇ ಅನೇಕ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಪ್ರೇರಣೆಯ ಕಥೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಾಗರಾಳ ಎಂಬ ಸಣ್ಣ ಹಳ್ಳಿಯಲ್ಲಿ, ಕೃಷಿಕ ಕುಟುಂಬದಲ್ಲಿ ಜನಿಸಿದ ಇವರು, ತಮ್ಮ ಕುಟುಂಬದಲ್ಲಿ ಮೊದಲ ಸರಕಾರಿ ಉದ್ಯೋಗ ಪಡೆದ ಹೆಗ್ಗಳಿಕೆಗೆ ಪಾತ್ರರಾದವರು.

ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದ ಯಶೋದಾ ಅವರು, ಅಂಗನವಾಡಿಯಿAದ ಪಿಯುಸಿ ವರೆಗೆ ಬಾಗಲಕೋಟೆ ಮತ್ತು ವಿಜಯಪುರದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ನಂತರ ಧಾರವಾಡದ ಕೆಸಿಡಿಯಲ್ಲಿ ಬಿಎ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು.

ಎA.ಎ ಮುಗಿಸಿದ ಬಳಿಕ ಬೆಂಗಳೂರಿನಲ್ಲಿ ಅಣ್ಣನ ಮನೆಯಲ್ಲಿ ಉಳಿದುಕೊಂಡು ನಿರಂತರ ಅಧ್ಯಯನ ನಡೆಸಿ, 2009ರಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದರು. ಕನ್ನಡ ಮಾಧ್ಯಮದಲ್ಲೇ ಓದಿ ಉನ್ನತ ಹುದ್ದೆ ತಲುಪಿದ ಇವರು ಇಂದು ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.

ಇದನ್ನೂ ಓದಿ: Free Sewing Machine- ಹಾವೇರಿ ಜಿಲ್ಲೆ: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ

 

Karnataka Police

ಡಿಎಸ್‌ಪಿಯಿಂದ ಎಸ್‌ಪಿ ವರೆಗೆ ಸೇವಾ ಪಯಣ

2010ರಲ್ಲಿ ಮೈಸೂರಿನ ಕೆಪಿಎನಲ್ಲಿ ತರಬೇತಿ ಪಡೆದುಕೊಂಡ ಯಶೋದಾ ಅವರು, 2011ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಸೇವೆ ಆರಂಭಿಸಿದರು. 2013ರಲ್ಲಿ ಉಡುಪಿ-ಕುಂದಾಪುರ ಉಪವಿಭಾಗದಲ್ಲಿ ಡಿವೈಎಸ್‌ಪಿಯಾಗಿ ಮೊದಲ ಪೋಸ್ಟಿಂಗ್ ದೊರಕಿತು.

ಬಳಿಕ ಹುಬ್ಬಳ್ಳಿ-ಧಾರವಾಡ, ದಾವಣಗೆರೆ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ ಇವರು, ಬೆಳಗಾವಿ ಪೊಲೀಸ್ ಕಮಿಷನರೇಟ್‌ನಲ್ಲಿ ಡಿಸಿಪಿಯಾಗಿ ಕಾರ್ಯನಿರ್ವಹಿಸುವ ವೇಳೆ ತಮ್ಮ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದರು. ನಗರ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವುದರ ಜೊತೆಗೆ ಅಪರಾಧ ನಿಯಂತ್ರಣದಲ್ಲಿ ತೋರಿದ ಸಾಧನೆಗಾಗಿ ಮುಖ್ಯಮಂತ್ರಿ ಪದಕಕ್ಕೂ ಭಾಜನರಾದರು.

ನಂತರ ಬೆಳಗಾವಿ ಲೋಕಾಯುಕ್ತ ಎಸ್ಪಿಯಾಗಿ, 2023ರ ಫೆಬ್ರವರಿ 24ರಂದು ಕೊಪ್ಪಳ ಎಸ್‌ಪಿಯಾಗಿ ಸೇವೆ ಸಲ್ಲಿಸಿದ ಯಶೋದಾ ಅವರು, ಬೆಂಗಳೂರು ಕಾರಾಗೃಹ ಇಲಾಖೆಯಲ್ಲಿಯೂ ಕಾರ್ಯನಿರ್ವಹಿಸಿ, ಇದೀಗ ಹಾವೇರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: Haveri Minister Candidate List- ಹಾವೇರಿ ಜಿಲ್ಲೆಯ ಶಾಸಕರಲ್ಲಿ ಯಾರಿಗೆ ಒಲಿಯಲಿದೆ ಮಂತ್ರಿ ಭಾಗ್ಯ?

ಅಡ್ಡಾದಿಡ್ಡಿ ಹೋರಿ ಹಬ್ಬಕ್ಕೆ ಕಟ್ಟುನಿಟ್ಟಿನ ಬ್ರೇಕ್

ಹಾವೇರಿ ಜಿಲ್ಲೆಯಲ್ಲಿ ದೀಪಾವಳಿಯ ಸಂದರ್ಭ ಹೋರಿ ಹಬ್ಬಗಳು ಸಾಮಾನ್ಯ. ಆದರೆ ಈ ವರ್ಷ ಹೋರಿ ಹಬ್ಬದ ವೇಳೆ ನಡೆದ ದುರ್ಘಟನೆಗಳಲ್ಲಿ ನಾಲ್ವರು ಜೀವ ಕಳೆದುಕೊಂಡಿದ್ದು, ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ.

ಈ ಹಿನ್ನೆಲೆ, ಎಸ್‌ಪಿ ಯಶೋದಾ ವಂಟಗೋಡಿ ಅವರು ಹೋರಿ ಹಬ್ಬಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರುವ ಮೂಲಕ ಸ್ಪಷ್ಟ ಸಂದೇಶ ನೀಡಿದ್ದಾರೆ. ಸರ್ಕಾರದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆಯೋಜಕರಿಗೆ ಸೂಚಿಸಿ, ನಿಯಮ ಉಲ್ಲಂಘಿಸಿದ ಹೋರಿ ಮಾಲೀಕರು ಹಾಗೂ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Haveri SP Yashoda Vantagodi
ಎಸ್‌ಪಿ ಯಶೋದಾ ವಂಟಗೋಡಿ

ಇದರಿಂದ ಅನೇಕ ಗ್ರಾಮಗಳಲ್ಲಿ ಸ್ವಯಂಪ್ರೇರಿತವಾಗಿ ಹೋರಿ ಹಬ್ಬಗಳನ್ನು ರದ್ದುಪಡಿಸಲಾಗುತ್ತಿದೆ. ದೀಪಾವಳಿಯಿಂದ ಯುಗಾದಿ ವರೆಗೆ ನಡೆಯುತ್ತಿದ್ದ ಒಂದನೇ ಹಟ್ಟಿ ಹಬ್ಬ, ಎರಡನೇ ಹಟ್ಟಿ ಹಬ್ಬಗಳ ಸಂಭ್ರಮಕ್ಕೆ ಈ ಬಾರಿ ಕರಿಛಾಯೆ ಆವರಿಸಿದೆ. ಹೋರಿ ಹಬ್ಬದ ಅಭಿಮಾನಿಗಳು ಇದೀಗ ಪಕ್ಕದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಸೊರಬ ಭಾಗಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: Haveri Hingaru Bele Vime – ಹಾವೇರಿ ಜಿಲ್ಲೆಯ ರೈತರಿಂದ ಹಿಂಗಾರು ಬೆಳೆವಿಮೆ ನೋಂದಣಿಗೆ ಅರ್ಜಿ ಆಹ್ವಾನ

ಯುವಜನತೆಗೆ ಸ್ಫೂರ್ತಿಯ ಸಂಕೇತ

ಸಾಮಾನ್ಯ ಹಿನ್ನೆಲೆಯಿಂದ ಬಂದು, ಪರಿಶ್ರಮ ಮತ್ತು ಶಿಸ್ತಿನ ಮೂಲಕ ಉನ್ನತ ಹುದ್ದೆ ತಲುಪಿರುವ ಯಶೋದಾ ವಂಟಗೋಡಿ ಅವರು ಇಂದು ಕೇವಲ ಪೊಲೀಸ್ ಅಧಿಕಾರಿ ಮಾತ್ರವಲ್ಲ, ಯುವಜನತೆಗೆ ಸ್ಫೂರ್ತಿಯ ಸಂಕೇತ.

ಕಾನೂನು ಪಾಲನೆ ಮತ್ತು ಮಾನವೀಯತೆಯ ನಡುವಿನ ಸಮತೋಲನವನ್ನು ಸಾಧಿಸುತ್ತಿರುವ ಅವರ ಕಾರ್ಯಶೈಲಿ, ಹಾವೇರಿ ಜಿಲ್ಲೆಗೆ ಹೊಸ ಭರವಸೆಯ ಬೆಳಕು ನೀಡುತ್ತಿದೆ. ಯಶೋಧಾ ಅವರಿಗೆ ‘ಹಾವೇರಿ ಪೇಜ್’ ವತಿಯಿಂದ ಹೃದಯಪೂರ್ವಕ ಅಭಿನಂದನೆಗಳು…

  • ಮಾಲತೇಶ್ ಮಾಳಮ್ಮನವರ್

Haveri Hori Habba- ಹೋರಿ ಹಬ್ಬಕ್ಕೆ ಬ್ರೇಕ್ | ಬ್ಯಾನ್ ಆಗುತ್ತಾ ಕ್ರೇಜಿ ಹಬ್ಬ? | ಹಾವೇರಿ ಜಿಲ್ಲಾಡಳಿತದ ಷರತ್ತುಗಳೇನು?


Spread the love
WhatsApp Group Join Now
Telegram Group Join Now

Leave a Comment