ಹಾವೇರಿ ಜಿಲ್ಲೆಯ ಜನಪ್ರಿಯ ‘ಹೋರಿಹಬ್ಬ’ಕ್ಕೆ (Haveri Hori Habba) ಬ್ರೇಕ್ ಬೀಳುವ ಅಪಾಯ ಎದುರಾಗಿದೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ನಿಯಮ ರೂಪಿಸಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಹಾವೇರಿ ಜಿಲ್ಲೆಯ ಪ್ರಸಿದ್ಧ ಪ್ರಾದೇಶಿಕ ಹಬ್ಬವಾಗಿರುವ ‘ಹೋರಿಹಬ್ಬ’ ಅಥವಾ ‘ಹಟ್ಟಿಹಬ್ಬ’ಕ್ಕೆ ಬ್ರೇಕ್ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಪ್ರತೀ ವರ್ಷ ದೀಪಾವಳಿಯಿಂದ ಆರಂಭವಾಗುವ ಹೋರಿ ಬೆದರಿಸುವ ಸ್ಪರ್ಧೆ ಅನೇಕ ಸಾವು-ನೋವಿಗೆ ಕಾರಣವಾಗುತ್ತಿರುವುದರಿಂದ ಈ ವರ್ಷದಿಂದ ಹಾವೇರಿ ಜಿಲ್ಲಾಡಳಿತ ಕಠಿಣ ನಿಯಮಗಳನ್ನು ರೂಪಿಸಿದೆ.
‘ದೀಪಾವಳಿ’ ದಿನ ಸಾಂಪ್ರದಾಯಿಕವಾಗಿ ಎತ್ತುಗಳನ್ನು ಅಲಂಕರಿಸಿಕೊಂಡು, ದೇವಸ್ಥಾನ ಹಾಗೂ ಓಣಿಗಳಲ್ಲಿ ಮೆರವಣಿಗೆ ಮಾಡಲು ಯಾವುದೇ ನಿಷೇಧ, ಷರತ್ತುಗಳು ಅನ್ವಯವಾಗುವುದಿಲ್ಲ. ಆದರೆ ದೀಪಾವಳಿ ನಂತರ ಖುಷಿಗಾಗಿ, ಸ್ಪರ್ಧೆಗಾಗಿ ಹಾಗೂ ಪ್ರತಿಷ್ಠೆಗಾಗಿ ಆಯೋಜಿಸುವ ಹಟ್ಟೀ ಹಬ್ಬ ಅಥವಾ ಹೋರಿ ಬೆದರಿಸುವ ಸ್ಪರ್ಧೆಗೆ ಬಹಳಷ್ಟು ಷರತ್ತುಗಳನ್ನು ಜಿಲ್ಲಾಡಳಿತ ವಿಧಿಸಿದೆ.
ಷರತ್ತುಗಳಿಗೆ ಕಾರಣವೇನು?
ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಪಾಡ್ಯದಿಂದ ಶುರುವಾಗುವ ಹೋರಿಹಬ್ಬ ಯುಗಾದಿಯ ವರೆಗೂ ನಡೆಯುತ್ತಿತ್ತು. ಜಿಲ್ಲೆಯ ಬಹುತೇಕ ನಗರ, ಗ್ರಾಮೀಣ ಪ್ರದೇಶದಲ್ಲಿ ಭರ್ಜರಿ ಹೋರಿ ಬೆದರಿಸುವ ಸ್ಪರ್ಧೆಗಳು, ರಾಜ್ಯ ಮಟ್ಟದ ಹೋರಿ ಹಬ್ಬಗಳನ್ನು ಆಯೋಜಿಸಲಾಗುತ್ತಿತ್ತು.
ಆದರೆ, ಈ ವರ್ಷ ದೀಪಾವಳಿಯ ಪಾಡ್ಯದ ದಿನವೇ ಅವಘಡ ಸಂಭವಿಸಿದ ಪರಿಣಾಮ ಹೋರಿ ಹಬ್ಬಕ್ಕೆ ಕರಿಭಾಯೆ ಆವರಿಸಿದೆ. ಹೋರಿ ಹಬ್ಬದ ಪ್ರೇಮಿಗಳು ಪಕ್ಕದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಸೊರಬ ತಾಲೂಕಿನಲ್ಲಿ ನಡೆಯುವ ಹೋರಿ ಹಬ್ಬಗಳಿಗೆ ತೆರಳಿ ಕಣ್ಣುಂಬಿಕೊಳ್ಳುವಂತಾಗಿದೆ.

ಹೋರಿ ಹಬ್ಬವೆಂದರೆ….
ವಿಶೇಷವಾಗಿ ಹಾವೇರಿ ಜಿಲ್ಲೆಯಲ್ಲಿ ಪ್ರಧಾನವಾದ ಸಾಂಪ್ರದಾಯಿಕ ಜನಪದ ಹಬ್ಬವಿದು. ಹಾವೇರಿ ನೆರೆಯ ಶಿವಮೊಗ್ಗ, ಧಾರವಾಡ, ದಾವಣಗೆರೆ, ಬಳ್ಳಾರಿ ಜಿಲ್ಲೆಗಲ್ಲಿಯೂ ಅಲ್ಲಲ್ಲಿ ಈ ‘ಆಟ’ ನಡಯುತ್ತಿದೆಯಾದರೂ ಹಾವೇರಿ ಜಿಲ್ಲೆಯಲ್ಲಿ ಇದರ ಖರ‍್ರೇ ಬೇರೆ! ತಮಿಳುನಾಡಿನ ಜಲ್ಲಿಕಟ್ಟು ಮಾದರಿಯಲ್ಲಿಯೇ ಹಾವೇರಿ ಜಿಲ್ಲೆಯಲ್ಲಿ ಹೋರಿಹಬ್ಬ ಪ್ರಸಿದ್ಧವಾಗಿದೆ.
ಹೋರಿಗಳಿಗೆ ಬಣ್ಣ ಬಣ್ಣದ ಜೂಲುಗಳನ್ನು ಹಾಕಿ ಕೊರಳಿಗೆ ಗೆಜ್ಜೆಸರ, ಕೊಂಬುಗಳಿಗೆ ರಿಬ್ಬನ್ ಹಾಗೂ ಬಣ್ಣಬಣ್ಣದ ಬಲೂನುಗಳನ್ನು ಕಟ್ಟಿ ಸಿಂಗರಿಸಲಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಒಣಕೊಬ್ಬರಿ ಸರವನ್ನು ಕೊರಳಿಗೆ ಕಟ್ಟಲಾಗುತ್ತದೆ.
ಹೀಗೆ ಸಿಂಗರಿಸಿದ ಹೋರಿಗಳಿಗೆ ಎರಡು ಮೂರು ಹಗ್ಗಗಳನ್ನು ಕಟ್ಟಿ ಹಿಡಿದುಕೊಂಡು ಸ್ಪರ್ಧೆಗೆ ನಿಗದಿ ಮಾಡಿದ ಸ್ಥಳದಲ್ಲಿ ದೊಡ್ಡಬ್ಬರದೊಂದಿಗೆ ಓಡಿಸಲಾಗುತ್ತದೆ. ಸಾಹಸಿಗಳು ಹೀಗೆ ಓಡುವ ಹೋರಿಗಳನ್ನು ಹಿಡಿದು ಅದರ ಕೊರಳಲ್ಲಿರುವ ಕೊಬ್ಬರಿಯನ್ನು ಹರಿದುಕೊಳ್ಳಬೇಕು.
ಭಯದಿಂದ ಅಡ್ಡಾದಿಡ್ಡಿ ಓಡುವ ಹಬ್ಬದ ಹೋರಿಗಳು ಸಾಹಸಿಗಳಿಗೆ ಒಂದಕ್ಕಿಂತ ಒಂದು ಮಿಗಿಲು ಎನ್ನುವಂತೆ ರಸದೌತಣ ಒದಗಿಸುತ್ತವೆ. ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಬಹುಮಾನ ವಿಜೇತ ಹೋರಿಗಳಿಗೆ ಬಂಗಾರ, ಬೆಳ್ಳಿ, ಆಭರಣಗಳು ಸೇರಿದಂತೆ ವಿವಿಧ ಬೆಲೆ ಬಾಳುವ ವಸ್ತುಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.
ನಾಲ್ವರ ಪ್ರಾಣ ಬಲಿ
ಈ ವರ್ಷ ದೀಪಾವಳಿ ಪಾಡ್ಯದ ದಿನ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಹಾವೇರಿ ಜಿಲ್ಲೆಯ ಬೇರೆ ಬೇರೆ ಊರುಗಳಲ್ಲಿ ನಡೆದ ಪ್ರತ್ಯೇಕ ಅವಘಡದಲ್ಲಿ ಜಿಲ್ಲೆಯ ನಾಲ್ವರು ಮೃತಪಟ್ಟಿದ್ದಾರೆ. ಅದರಲ್ಲಿ ಇಬ್ಬರು ಹೋರಿಹಬ್ಬಕ್ಕೆ ಸಂಬAಧವೇ ಇಲ್ಲದ ಅಮಾಯಕ ವೃದ್ಧರು ಎನ್ನುವುದು ವಿಶೇಷ. ಬಲಿಯಾದ ನಾಲ್ವರ ವಿವರ ಹೀಗಿದೆ:
- ಹಾವೇರಿ ನಗರದಲ್ಲಿ ಸ್ಥಳೀಯ ದಾನೇಶ್ವರಿ ನಗರದ 70 ವರ್ಷದ ಚಂದ್ರಶೇಖರ ಕೋಡಿಹಳ್ಳಿ
- ದೇವಿಹೊಸೂರ ಗ್ರಾಮದಲ್ಲಿ 75 ವರ್ಷದ ಘನಿಸಾಬ ಮಹಮ್ಮದಹುಸೇನ್ ಬಂಕಾಪುರ
- ಹಾನಗಲ್ಲ ತಾಲೂಕಿನ ತಿಳುವಳ್ಳಿ ಗ್ರಾಮದಲ್ಲಿ 24 ವರ್ಷದ ಭರತ್ ರಾಮಪ್ಪ ಹಿಂಗಮೇರಿ
- ಹಾನಗಲ್ಲ ತಾಲೂಕಿನ ಯಳವಟ್ಟಿ ಗ್ರಾಮದ 36 ವರ್ಷದ ಶ್ರೀಕಾಂತ ಗುರುಶಾಂತಪ್ಪ ಕೋಣಕೇರಿ
ರಾಜ್ಯ ಸರ್ಕಾರದ ನಿಯಮವೇನು?
ರಾಜ್ಯ ಸರ್ಕಾರ 2022ರಲ್ಲಿಯೇ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಹೋರಿಹಬ್ಬ, ಎತ್ತಿನ ಓಟ, ಎತ್ತಿನ ಗಾಡಿ ಓಟವನ್ನು ನಿರ್ಬಂಧಿಸಿ 18 ಷರತ್ತಿಗೊಳನ್ನು ಒಳಗೊಂಡ ಆದೇಶ ಹೊರಡಿಸಿದೆ. ಆದರೆ, ಆದೇಶವನ್ನು ಹಾವೇರಿ ಜಿಲ್ಲೆಯಲ್ಲಿ ಎರಡೂರು ವರ್ಷ ನೆಪಕ್ಕೆ ಎಂಬಂತೆ ಅನುಸರಿಸಿ ಕ್ರಮೇಣ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಹಬ್ಬ ಆಚರಿಸುತ್ತ ಬರಲಾಗುತ್ತಿತ್ತು.
ಸಾಮಾನ್ಯವಾಗಿ ಹೋರಿ ತಿವಿತ, ಕಾಲ್ತುಳಿತದಂತಹ ಸಣ್ಣ ಪುಟ್ಟ ಅವಘಡಗಳ ಜೊತೆಗೆ ಎಲ್ಲೋ ಅಪರೂಪಕ್ಕೆ ಸಾವು ಸಂಭವಿಸುತ್ತಿದ್ದರಿಂದ ಜಿಲ್ಲಾಡಳಿತ ಕೂಡ ಸರ್ಕಾರದ ಷರತ್ತು ಜಾರಿಗೆ ತರುವ ಕುರಿತು ಅಷ್ಟಾಗಿ ಗಮನಹರಿಸಿರಲಿಲ್ಲ. ಆದರೆ, ಈ ಬಾರಿ ದೀಪಾವಳಿ ಆರಂಭದಲ್ಲಿ ದುರಂತ ಸಂಭವಿಸಿದ್ದರಿAದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಿದೆ.

ಹೋರಿ ಹಬ್ಬ ಆಯೋಜನೆಗೆ ಜಿಲ್ಲಾಡಳಿತದ ಷರತ್ತುಗಳೆನು?
- ಹಬ್ಬಕ್ಕೆ 15 ದಿನ ಮೊದಲೇ ತಹಸೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಬೇಕು.
- ಜಿಲ್ಲಾಧಿಕಾರಿಗಳಿಂದ ಸಾಧಕ-ಬಾಧಕ ಪರಿಶೀಲನೆ ನಡೆಸಲಾಗುತ್ತದೆ.
- ಆಯೋಜನೆ ಮೇಲ್ವಿಚಾರಣೆಗಾಗಿ ಅಧಿಕಾರಿಗಳ ಸಮಿತಿ ರಚನೆ ಮಾಡಬೇಕು.
- 100 ಮೀಟರ್ ಉದ್ದ, 7.5 ಮೀಟರ್ ಅಗಲದ ಸಮತಟ್ಟಾದ ಟ್ರ‍್ಯಾಕ್ ನಿರ್ಮಾಣ ಮಾಡಬೇಕು.
- ಸ್ಥಳದಲ್ಲಿ ತುರ್ತು ವೈದ್ಯಕೀಯ ವ್ಯವಸ್ಥೆ ಕಡ್ಡಾಯ
- ಎತ್ತಿನ ಓಟದ ಸಂಪೂರ್ಣ ವಿಡಿಯೋ ಚಿತ್ರೀಕರಣ ಹಾಗೂ ಅದರ ಒಂದು ಪ್ರತಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು.
- ಎತ್ತುಗಳಿಗೆ ಯಾವುದೇ ಔಷಧ / ಹಿಂಸೆ ನೀಡುವಂತಿಲ್ಲ.
…ಹೀಗೆ ಒಟ್ಟು 18 ಕಡ್ಡಾಯ ಷರತ್ತುಗಳನ್ನು ಹಾವೇರಿ ಜಿಲ್ಲಾಡಳಿತ ಹೋರಿ ಹಬ್ಬದ ಆಯೋಜಕರಿಗೆ ವಿಧಿಸಲಾಗಿದೆ.
ಮಂಕು ಕವಿದ ಹೋರಿಹಬ್ಬ
ದೀಪಾವಳಿ ದಿನವೇ ನಡೆದ ಸಾಂಪ್ರದಾಯಕ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ ಸಂಭವಿಸಿ ಹಾವೇರಿ ಜಿಲ್ಲೆಯ ನಾಲ್ವರು ಜೀವ ಕಳೆದುಕೊಂಡ ಹಿನ್ನೆಲೆಯಲ್ಲಿ ಸರ್ಕಾರದ ನಿಬಂಧನೆಗಳನ್ನು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಿದ್ದು; ಕಠಿಣ ಷರತ್ತುಗಳನ್ನು ವಿಧಿಸಿದೆ.
ಈ ಅತೀ ಕಠಿಣ ಷರತ್ತುಗಳನ್ನು ಪಾಲಿಸುವುದು ಕಷ್ಟ ಎಂಬುದನ್ನು ಅರಿತ ಹೋರಿ ಹಬ್ಬದ ಆಯೋಜಕರು ಸ್ವಯಂ ಪ್ರೇರಣೆಯಿಂದ ಹೋರಿ ಹಬ್ಬವನ್ನು ರದ್ದುಪಡಿಸುತ್ತಿದ್ದಾರೆ. ಪರಿಣಾಮ ಅನೇಕ ಗ್ರಾಮಗಳಲ್ಲಿ ಆಯೋಜಕರೇ ಸ್ವಯಂ ಪ್ರೇರಣೆಯಿಂದ ಹೋರಿ ಹಬ್ಬ ರದ್ದುಪಡಿಸುತ್ತಿದ್ದಾರೆ.
- ಮಾಲತೇಶ್ ಮಾಳಮ್ಮನವರ್

ಹಾವೇರಿ ಜಿಲ್ಲೆಯ ಸುದ್ದಿ, ಸರ್ಕಾರಿ ಯೋಜನೆಗಳು, ಅರ್ಜಿ ಪ್ರಕ್ರಿಯೆಗಳು, ರೈತರ ಉಪಯುಕ್ತ ಮಾಹಿತಿ ಮತ್ತು ಸ್ಥಳೀಯ ಅಪ್ಡೇಟ್ಗಳನ್ನು ನಿಖರ ಹಾಗೂ ಸರಳವಾಗಿ ಹಂಚುವ ಜಾಲತಾಣ
1 thought on “Haveri Hori Habba- ಹೋರಿ ಹಬ್ಬಕ್ಕೆ ಬ್ರೇಕ್ | ಬ್ಯಾನ್ ಆಗುತ್ತಾ ಕ್ರೇಜಿ ಹಬ್ಬ? | ಹಾವೇರಿ ಜಿಲ್ಲಾಡಳಿತದ ಷರತ್ತುಗಳೇನು?”