ಹಾವೇರಿ ಜಿಲ್ಲೆಯ ಎಲ್ಲಾ ಎಂಟು ತಾಲೂಕಿನಿಂದ ತಲಾ ಒಂದೊಂದು ಗ್ರಾಮ ಪಂಚಾಯತಿಗಳಿಗೆ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ (Gandhi Grama Puraskara Haveri) ಆಯ್ಕೆಯಾಗಿವೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಗ್ರಾಮಾಭಿವೃದ್ಧಿ ಎಂದರೆ ಕೇವಲ ರಸ್ತೆ-ನೀರಿನ ವ್ಯವಸ್ಥೆ ಮಾತ್ರವಲ್ಲ; ಜನರ ಜೀವನಮಟ್ಟ ಸುಧಾರಿಸುವುದು, ಆಡಳಿತದಲ್ಲಿ ಪಾರದರ್ಶಕತೆ, ಸಮಗ್ರ ಅಭಿವೃದ್ಧಿ ಮತ್ತು ಜನಪಾಲನೆಯ ನೈಜ ಅರ್ಥವನ್ನು ತೋರಿಸುವ ಕೆಲಸ.
ಈ ಎಲ್ಲಾ ಮಾನದಂಡಗಳನ್ನು ಪೂರೈಸಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿದ ಹಾವೇರಿ ಜಿಲ್ಲೆಯ ಎಂಟು ಗ್ರಾಮ ಪಂಚಾಯಿತಿಗಳು 2023-24ನೇ ಸಾಲಿನ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಆಯ್ಕೆಯಾಗಿವೆ.
ಬೆಂಗಳೂರು ನಗರದಲ್ಲಿ ಕಳೆದ ಡಿಸೆಂಬರ್ 1ರಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರು ಆಯ್ಕೆಯಾದ ಪಂಚಾಯಿತಿಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸನ್ಮಾನ ನೆರವೇರಿಸಿದರು.

ಇದನ್ನೂ ಓದಿ: Free Sewing Machine- ಹಾವೇರಿ ಜಿಲ್ಲೆ: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ
ಪುರಸ್ಕೃತ ಗ್ರಾಮ ಪಂಚಾಯಿತಿಗಳ ಪಟ್ಟಿ
ಹಾವೇರಿ ಜಿಲ್ಲೆಯ ಎಲ್ಲಾ ಎಂಟು ತಾಲೂಕಿನಿಂದಲೂ ಒಂದೊಂದು ಗ್ರಾಮ ಪಂಚಾಯಿತಿ ಆಯ್ಕೆಯಾಗಿರುವುದು ಈ ವರ್ಷದ ವಿಶೇಷ. ಜಿಲ್ಲೆಯ ಪುರಸ್ಕೃತ ಗ್ರಾಮ ಪಂಚಾಯಿತಿಗಳ ತಾಲೂಕುವಾರು ಪಟ್ಟಿ ಹೀಗಿದೆ:
- ಬ್ಯಾಡಗಿ ತಾಲೂಕು: ಹಿರೇಹಳ್ಳಿ
- ರಾಣೆಬೆನ್ನೂರು ತಾಲೂಕು: ಬೆನಕನಕೊಂಡ
- ಹಾವೇರಿ ತಾಲೂಕು: ದೇವಗಿರಿ
- ಶಿಗ್ಗಾವಿ ತಾಲೂಕು: ಕೋಣನಕೇರಿ
- ಹಾನಗಲ್ ತಾಲೂಕು: ಕಂಚಿನೆಗಳೂರು
- ಹಿರೇಕೆರೂರು ತಾಲೂಕು: ಅಬಲೂರು
- ರಟ್ಟೀಹಳ್ಳಿ ತಾಲೂಕು: ಹುಲ್ಲತ್ತಿ
- ಸವಣೂರು ತಾಲೂಕು: ಮಂತ್ರೋಡಿ
ಈ ಎಂಟೂ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿನ ಅಭಿವೃದ್ಧಿಯ ಕೆಲಸಗಳಲ್ಲಿ ಪಾರದರ್ಶಕತೆ, ಜನರ ತಲುಪುವ ಸೇವೆ, ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಸಮಗ್ರ ಗ್ರಾಮವಿಕಾಸದ ದೃಷ್ಟಿಯಿಂದ ರಾಜ್ಯ ಮಟ್ಟದಲ್ಲಿ ಉನ್ನತ ಸ್ಥಾನ ಪಡೆದಿವೆ.

ಇದನ್ನೂ ಓದಿ: Haveri Minister Candidate List- ಹಾವೇರಿ ಜಿಲ್ಲೆಯ ಶಾಸಕರಲ್ಲಿ ಯಾರಿಗೆ ಒಲಿಯಲಿದೆ ಮಂತ್ರಿ ಭಾಗ್ಯ?
‘ಗಾಂಧಿ ಗ್ರಾಮ ಪುರಸ್ಕಾರ’ ಯಾವ ಆಧಾರದಲ್ಲಿ ನೀಡಲಾಗುತ್ತದೆ?
ರಾಜ್ಯ ಸರ್ಕಾರವು ಉತ್ತಮ ಪಂಚಾಯಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪುರಸ್ಕಾರವನ್ನು ನೀಡುತ್ತದೆ. ಇದಕ್ಕಾಗಿ ಈ ಕೆಳಗಿನ ಹಲವು ಮಾನದಂಡಗಳನ್ನು ಪರಿಗಣಿಸಲಾಗುತ್ತದೆ:
- ಪಂಚಾಯಿತಿ ಆಡಳಿತದ ಪಾರದರ್ಶಕತೆ
- ಅಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ
- ಹಣಕಾಸಿನ ಸರಿಯಾದ ಬಳಕೆ
- ಗ್ರಾಮ ನೈರ್ಮಲ್ಯ ನಿರ್ವಹಣೆ
- ಕುಡಿಯುವ ನೀರು ಮತ್ತು ಸ್ವಚ್ಛತಾ ವ್ಯವಸ್ಥೆ
- ಗ್ರಾಮ ಸಭೆಗಳ ಆಯೋಜನೆ ಮತ್ತು ಜನಪಾಲನೆಯಲ್ಲಿ ಜನಸಹಭಾಗಿತ್ವ
- ನರೇಗಾ ಯೋಜನೆ ಜಾರಿ
- ಆರೋಗ್ಯ ಮತ್ತು ಪೌಷ್ಠಿಕ ಸೇವೆಗಳ ತಲುಪಿಕೆ
- ಲಿಂಗಾನುಪಾತ ಮತ್ತು ಬಾಲ್ಯವಿವಾಹ ತಡೆ
- ಪರಿಸರ ಸಂರಕ್ಷಣೆ ಮತ್ತು ಘನತ್ಯಾಜ್ಯ ವಿಲೇವಾರಿ
ಈ ಎಲ್ಲಾ ಅಂಶಗಳಲ್ಲಿ ಉತ್ತಮ ಸಾಧನೆ ತೋರಿದರಷ್ಟೇ ಆಯಾ ಗ್ರಾಮ ಪಂಚಾಯತಿ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಅರ್ಹತೆ ಪಡೆಯುತ್ತದೆ.

ಇದನ್ನೂ ಓದಿ: Haveri Three MLAs Secret Meeting- ಹಾವೇರಿ ಮೂವರು ಶಾಸಕರ ಡಿಕೆಶಿ ಭೇಟಿಯ ಹಕೀಕತ್ ಏನು? ಮಂತ್ರಿಗಿರಿಗಾಗಿ ಹಕ್ಕೊತ್ತಾಯ!
ಪುರಸ್ಕಾರದಲ್ಲಿ ಏನು ಇರುತ್ತದೆ?
ಗಾಂಧಿ ಗ್ರಾಮ ಪುರಸ್ಕಾರವು ಫಲಕ ಹಾಗೂ 5 ಲಕ್ಷ ರೂ. ನಗದು ಬಹುಮಾನವನ್ನು ನೀಡಲಾಗುತ್ತದೆ. ಈ ಐದು ಲಕ್ಷ ರೂಪಾಯಿ ನಗದು ಮೊತ್ತವನ್ನು ಗ್ರಾಮಾಭಿವೃದ್ಧಿ ಕೆಲಸಗಳಿಗೆ ಮಾತ್ರ ಬಳಕೆ ಮಾಡಬೇಕಾಗಿದೆ.
ಆಯಾ ಗ್ರಾಮ ಪಂಚಾಯಿತಿಗಳು ಮೊದಲು ಕ್ರಿಯಾ ಯೋಜನೆ (Action Plan) ಸಲ್ಲಿಸಿದ ನಂತರವೇ ನಗದು ಬಹುಮಾನವನ್ನು ಸರ್ಕಾರ ಬಿಡುಗಡೆ ಮಾಡಲಾಗುತ್ತದೆ.

ಹಾವೇರಿ ಜಿಲ್ಲೆಗೆ ವಿಶೇಷ ಹೆಮ್ಮೆ
ಜಿಲ್ಲೆಯ ಎಂಟೂ ತಾಲೂಕುಗಳಲ್ಲಿ ತಲಾ ಒಂದೊಂದು ಗ್ರಾಮಪಂಚಾಯತಿಗಳು ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಭಾಜನವಾಗಿರುವುದರಿಂದ ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಲ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತಿಯೊಂದು ತಾಲೂಕಿಗೆ ಒಂದು ಪಂಚಾಯಿತಿ ಪುರಸ್ಕಾರ ಪಡೆದಿರುವುದು ಜಿಲ್ಲೆಯ ಅಭಿವೃದ್ಧಿ ಚೈತನ್ಯಕ್ಕೆ ಸಾಕ್ಷಿ. ಇವು ಇತರ ಪಂಚಾಯಿತಿಗಳಿಗೆ ಮಾದರಿಯಾಗಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮಗಳು ಈ ಮಟ್ಟ ತಲುಪಲು ಇದು ಪ್ರೇರಣೆ ಆಗಲಿ ಎಂದು ಅವರು ಹೇಳಿದರು.
ಗ್ರಾಮಾಭಿವೃದ್ಧಿಗೆ ಸ್ಪೂರ್ತಿಯಾದ ಪುರಸ್ಕಾರ
ಈ ಪುರಸ್ಕಾರವು ಕೇವಲ ಗೌರವವಷ್ಟೇ ಅಲ್ಲ; ಗ್ರಾಮಸ್ಥರ ಒಗ್ಗಟ್ಟಿನ ಸಂಕೇತ, ಪಂಚಾಯಿತಿಗಳ ಉತ್ತಮ ಆಡಳಿತದ ಗುರುತು ಮತ್ತು ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಪ್ರೇರಕ ಶಕ್ತಿಯಾಗಿದೆ.
ಈ ಮೂಲಕ ಹಾವೇರಿ ಜಿಲ್ಲೆಯು ಗ್ರಾಮಾಭಿವೃದ್ಧಿಗೆ ಮಾದರಿಯಾಗಿದೆ. ಇದೇ ರೀತಿಯ ಶುದ್ಧ ಆಡಳಿತ ನಿರ್ವಹಣೆಯ ಮೂಲಕ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳು ಮಾದರಿಯಾಗಲಿ ಎಂದು ಆಶಿಸೋಣ.
ಗಾಂಧಿ ಗ್ರಾಮ ಪುರಸ್ಕಾರ ಸಮಾರಂಭ
ಬ್ಯಾಡಗಿ ತಾಲೂಕು ಬೆನಕನಕೊಂಡ ಗ್ರಾ,ಪಂ ಗೆ ಪುರಸ್ಕಾರ ವಿತರಣೆ
ಶ್ರೀಮತಿ ರುಚಿ ಬಿಂದಾಲ್, ಜಿಲ್ಲಾ ಪಂಚಾಯಿತಿ ಸಿಇಒ

ಹಾವೇರಿ ಜಿಲ್ಲೆಯ ಸುದ್ದಿ, ಸರ್ಕಾರಿ ಯೋಜನೆಗಳು, ಅರ್ಜಿ ಪ್ರಕ್ರಿಯೆಗಳು, ರೈತರ ಉಪಯುಕ್ತ ಮಾಹಿತಿ ಮತ್ತು ಸ್ಥಳೀಯ ಅಪ್ಡೇಟ್ಗಳನ್ನು ನಿಖರ ಹಾಗೂ ಸರಳವಾಗಿ ಹಂಚುವ ಜಾಲತಾಣ
2 thoughts on “Gandhi Grama Puraskara Haveri- ಹಾವೇರಿ ಜಿಲ್ಲೆಯ ಎಂಟು ಗ್ರಾಮ ಪಂಚಾಯತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರ | ಗ್ರಾಮಾಭಿವೃದ್ಧಿಗೆ ಮಾದರಿಯಾದ ಜಿಲ್ಲೆ”