ಹಾವೇರಿ ಜಿಲ್ಲಾ ರಾಜಕೀಯದಲ್ಲಿ ಬಿರುಸಿನ ಚಲನೆ ಶುರುವಾಗಿದೆ. ಜಿಲ್ಲೆಯ ಮೂವರು ಶಾಸಕರು ದಿಢೀರ್ ಬೆಂಗಳೂರಿಗೆ ಹೋಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ರಾತ್ರೋ ರಾತ್ರಿ ಭೇಟಿಯಾಗಿರುವುದು (Haveri Three MLAs Secret Meeting) ಕುತೂಹಲ ಹೆಚ್ಚಿಸಿದೆ. ಈ ಕುರಿತ ವಿಶೇಷ ರಾಜಕೀಯ ವಿಶ್ಲೇಷಣೆ ಇಲ್ಲಿದೆ…
ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತಾವಧಿಯ ಎರಡೂವರೆ ವರ್ಷದ ಗಡಿ ದಾಟಿದೆ. ತೆರೆಮರೆಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಗುದ್ದಾಟ ಶುರುವಾಗಿದೆ.ಜೊತೆಗೆ ಮಂತ್ರಿಸ್ಥಾನದ ಹಂಚಿಕೆ, ವಿಸ್ತರಣೆ ಹಾಗೂ ಜಿಲ್ಲಾವಾರು ಪ್ರತಿನಿಧಿತ್ವದ ಕುರಿತು ಪಕ್ಷದ ಒಳಗೆ ಮತ್ತೆ ಚರ್ಚೆಗಳು ತೀವ್ರಗೊಳ್ಳುತ್ತಿವೆ.
ಇದಕ್ಕೆ ಪೂರಕವೆಂಬಂತೆ ಹಾವೇರಿ ಜಿಲ್ಲೆಯ ಮೂರು ಮಂದಿ ಶಾಸಕರು ದಿಢೀರ್ ಬೆಂಗಳೂರಿಗೆ ಹೋಗಿ ರಾತ್ರೋ ರಾತ್ರಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.
ಮಧ್ಯರಾತ್ರಿ ನಡೆದ ರಹಸ್ಯ ಭೇಟಿ?
ನವೆಂಬರ್ 21ರ ಶುಕ್ರವಾರ ರಾತ್ರಿ ಬೆಂಗಳೂರಿನ ಸದಾಶಿವನಗರದ ಡಿ.ಕೆ. ಶಿವಕುಮಾರ್ ಅವರ ಖಾಸಗಿ ನಿವಾಸದಲ್ಲಿ ಈ ‘ಮುಖ್ಯ’ ಸಭೆ ನಡೆದಿದೆ. ಈ ಸಭೆಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾವಿ ಶಾಸಕ ಯಾಸೀರ್ ಪಠಾಣ, ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ, ರಾಣೇಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಹಾಗೂ ಹಾವೇರಿ-ಗದಗ ಲೋಕಸಭಾ ಚುನಾವಣೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಗಡ್ಡದೇವರಮಠ ಭಾಗವಹಿಸಿದ್ದರು.
ವಿಶೇಷವೆಂದರೆ ಈ ಸಭೆಯಲ್ಲಿ ಮಾಜಿ ಸಚಿವ ಚನ್ನಪಟ್ಟಣದ ಸಿ.ಪಿ. ಯೋಗೇಶ್ವರ್ ಕೂಡ ಭಾಗಿಯಾಗಿದ್ದರು. ಈ ಸಭೆ ತಡರಾತ್ರಿ ವರೆಗೂ ನಡೆದಿದ್ದು, ಒಳಗೆ ನಡೆದ ಮಾತುಕತೆಗಳ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ರಾಜಕೀಯ ವಲಯದಲ್ಲಿ ಈ ಭೇಟಿಯ ಉದ್ದೇಶ ಕುರಿತು ಹಲವು ಊಹಾಪೋಹಗಳು ಕೇಳಿಬರುತ್ತಿವೆ. ಮುಖ್ಯವಾಗಿ ಮಂತ್ರಿಸ್ಥಾನ ಹಂಚಿಕೆಗೆ ಸಂಬಂಧಿಸಿದ ಮಾತುಕತೆಗಳು ನಡೆದಿರಬಹುದು ಎಂಬ ಮಾತು ಫುರಮಾಸಿ ಕೇಳಿಸುತ್ತಿದೆ!

ಸಿಎಂ ಭೇಟಿಯಿಂದ ರಾಜಕೀಯಕ್ಕೆ ‘ಡಬ್ಬಲ್ ಲೇಯರ್’
ಡಿಸಿಎಂ ನಿವಾಸದ ಭೇಟಿಯ ಮರು ದಿನವೇ, ಈ ಶಾಸಕರು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ಗಮನಾರ್ಹ. ಏಕಕಾಲದಲ್ಲಿ ರಾಜ್ಯದ ಇಬ್ಬರು ಪ್ರಮುಖ ನಾಯಕರನ್ನು ಹಾವೇರಿಯ ಮೂವರು ಶಾಸಕರು ಭೇಟಿಯಾಗಿರುವುದು ಹಲವರ ಕುತೂಹಲಕ್ಕೆ ಕಾರಣವಾಗಿದೆ.
ಪಕ್ಷದ ಒಳಬಣ ರಾಜಕಾರಣ ತೀವ್ರಗೊಂಡಿರುವ ಸಂದರ್ಭದಲ್ಲಿ ಈ ಭೇಟಿಗಳಿಗೆ ವಿಶೇಷ ಅರ್ಥ ನೀಡಲಾಗುತ್ತಿದೆ. ಹಾವೇರಿ ಜಿಲ್ಲೆಗೆ ಇನ್ನೂ ಮಂತ್ರಿಸ್ಥಾನ ಸಿಗದಿರುವುದು ಸ್ಥಳೀಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿರುವುದು ಸತ್ಯ. ಈ ಹಿನ್ನೆಲೆಯಲ್ಲಿ, ‘ಹಾವೇರಿಗೆ ಮಂತ್ರಿಸ್ಥಾನ ಬೇಕೇಬೇಕು’ ಎಂದು ಶಾಸಕರು ಒತ್ತಾಯಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಹೊಸ ಶಾಸಕರ ಅತ್ಯುತ್ಸಾಹ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಆರೂ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ. ಈ ಆರು ಜನ ಎಮ್ಮೆಲ್ಲೆಗಳಲ್ಲಿ ಮೂವರು ಹೊಸಬರು ಚುನಾಯಿತರಾಗಿರುವುದು ವಿಶೇಷವಾಗಿದೆ. ಈ ಮೂವರು ಇದೀಗ ಡಿಕೆಶಿ ಭೇಟಿ ಮಾಡಿದ್ದು; ಜಿಲ್ಲಾ ರಾಜಕೀಯ ವಲಯದಲ್ಲಿ ತಲೆಗೊಂದು ಮಾತು ಹರಿದಾಡುವಂತಾಗಿದೆ.

ನಿಜ ಹೇಳಬೇಕೆಂದರೆ, ಈ ಮೂರು ಜನ ಹೊಸ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದಾರೆ. ಕ್ಷೇತ್ರಾಭಿವೃದ್ಧಿ, ಜನ ಸಂಪರ್ಕದ ವಿಚಾರದಲ್ಲಿ ಮೂವರು ಮುಂಚೂಣಿಯಲ್ಲಿದ್ದಾರೆ. ಆದರೆ, ಪಂಚ ಗ್ಯಾರಂಟಿ ಯೋಜನೆಗಳ ಗುದುಮುರಿಗೆಯಲ್ಲಿ ಇರುವ ರಾಜ್ಯ ಸರ್ಕಾರ ಇವರ ವೇಗಕ್ಕೆ ಪೂರಕವಾದ ಅನುದಾನವನ್ನು ಒದಗಿಸುತ್ತಿಲ್ಲ ಎಂಬ ಕೊರಗು ದಟ್ಟವಾಗಿದೆ.
ಹಿರಿಯ ಶಾಸಕರ ಕತೆ ಏನು?
ಇನ್ನು ಕಳೆದ ಚುನಾವಣೆಯಲ್ಲಿ ಹಾವೇರಿ, ಬ್ಯಾಡಗಿ ಹಾಗೂ ಹಿರೇಕೆರೂರು ಕ್ಷೇತ್ರಗಳಲ್ಲಿ ಚುನಾಯಿತರಾಗಿರುವ ಹಿರಿಯ ಶಾಸಕರು ಸಂಪೂರ್ಣ ತಟಸ್ಥರಾಗಿದ್ದಾರೆ ಎಂದೇನಲ್ಲ. ಇವರಲ್ಲೂ ಕೂಡ ಉತ್ಸಾಹವಿದೆ. ಪ್ರಮುಖವಾಗಿ ಹಿರೇಕೇರೂರು ಶಾಸಕ ಯು ಬಿ ಬಣಕಾರ್ (UB Banakar) ಅವರು ಕ್ಷೇತ್ರಾಭಿವೃದ್ಧಿಗೆ ವಿಶೇಷ ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ಈ ಎರಡೂವರೆ ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಂಡಿದ್ದಾರೆ.

ಇನ್ನು ಬ್ಯಾಡಗಿ ಶಾಸಕ ಬಸವರಾಜ ನೀಲಪ್ಪ ಶಿವಣ್ಣನವರ (Basavaraja Neelappa Shivannanavar) ಅವರು ಕೂಡ ಅಭಿವೃದ್ಧಿ ದೆಸೆಯಲ್ಲಿ ಹಿಂದೆ ಬಿದ್ದಿಲ್ಲ. ಆದರೆ, ಬ್ಯಾಡಗಿ ಪಟ್ಟಣ ರಸ್ತೆ ವಿಸ್ತರಣೆ, ಕೆಲವು ಕಾಮಗಾರಿ ವಿಚಾರವಾಗಿ ಕ್ಷೇತ್ರದ ಜನರಲ್ಲಿ ಗೊಂದಲಗಳೆದ್ದಿವೆ. ಇನ್ನು ಹಾವೇರಿ ಶಾಸಕರೂ, ವಿಧಾನಸಭೆ ಉಪಸಭಾಪತಿಗಳು ಕೂಡ ಆಗಿರುವ ರುದ್ರಪ್ಪ ಲಮಾಣಿ (Rudrappa Lamani) ಅವರು ಕೂಡ ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ ನಾನು ಹಿಂದಿ ಬಿದ್ದಿಲ್ಲ ಎಂದು ಸ್ವಯಂ ಘೋಷಿಸಿಕೊಂಡಿದ್ದಾರೆ.

ಇದಕ್ಕೆ ಕಾರಣ; ಈಚೆಗೆ ಕ್ಷೇತ್ರದ ಹಳ್ಳಿ ಹಳ್ಳಿಯಲ್ಲೂ ಶಾಸಕರಿಗೆ ಘೇರಾವ್ ಹಾಕಲಾಗುತ್ತಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದವು. ಇದರಿಂದ ಕುಪಿತರಾಗಿದ್ದ ರುದ್ರಪ್ಪ ಲಮಾಣಿ ಅವರು ಪತ್ರಿಕಾಗೋಷ್ಠಿ ಕರೆದು ತಮ್ಮ ಕ್ಷೇತ್ರಾಭಿವೃದ್ಧಿ ನಡೆಯ ಬಗ್ಗೆ ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳ ಬಗ್ಗೆ ಅಲವತ್ತುಗೊಂಡಿದ್ದರು.
ಇದನ್ನೂ ಓದಿ: Haveri Hori Habba- ಹೋರಿ ಹಬ್ಬಕ್ಕೆ ಬ್ರೇಕ್ | ಬ್ಯಾನ್ ಆಗುತ್ತಾ ಕ್ರೇಜಿ ಹಬ್ಬ? | ಹಾವೇರಿ ಜಿಲ್ಲಾಡಳಿತದ ಷರತ್ತುಗಳೇನು?
ಜಿಲ್ಲೆಯ ಶಾಸಕರಿಗೆ ಸಣ್ಣಪುಟ್ಟ ಸ್ಥಾನಗಳ ಕೊಡುಗೆ
ಹಾವೇರಿ ಜಿಲ್ಲೆಯ ಮೂವರೂ ಹಿರಿಯ ಶಾಸಕರ ಪೈಕಿ ಬ್ಯಾಡಗಿ ಶಾಸಕರ ಬಸವರಾಜ ನೀಲಪ್ಪ ಶಿವಣ್ಣನವರ ಅವರಿಗೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಅವರನ್ನು ವಿಧಾನಸಭಾ ಉಪಸಭಾಪತಿ ಸ್ಥಾನದಲ್ಲಿ ಕೂಳ್ಳಿರಿಸಲಾಗಿದೆ. ಇನ್ನು ಹಿರೇಕೆರೂರು ಶಾಸಕ ಯು ಬಿ ಬಣಕಾರ್ ಅವರಿಗೆ ಈಚೆಗಷ್ಟೇ ವಿಧಾನಸಭೆ ಹಕ್ಕುಬಾಧ್ಯತೆಗಳ ಸಮಿತಿಯ ಅದ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇದೇ ಸಮಿತಿಗೆ ರಾಣೇಬೆನ್ನೂರು ಶಾಸಕ ಪ್ರಕಾಶ ಕೆ. ಕೋಳಿವಾಡ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಒಟ್ಟು ಆರು ಜನ ಶಾಸಕರನ್ನು ನೀಡಿದ ಹಾವೇರಿ ಜಿಲ್ಲೆಗೆ ಹೀಗೆ ಸಣ್ಣ ಪುಟ್ಟ ಸ್ಥಾನಗಳ ಉಡುಗೊರೆ ನೀಡಿ ತೃಪ್ತಿಪಡಿಸಲಾಗಿದೆ ಎಂಬ ಕೊರಗು ಶಾಸಕರಲ್ಲಿದೆ. ಕ್ಷೇತ್ರದ ಜನರಲ್ಲೂ ಈ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ಪ್ರಯುಕ್ತ ಸಂಪುಟ ಸರ್ಜರಿ ನಡೆಯುವುದು ನಿಶ್ಚಿತ. ಈ ಬಾರಿಯಾದರೂ ಹಾವೇರಿ ಜಿಲ್ಲೆಗೆ ಸಚಿವ ಸ್ಥಾನ ಬೇಕು ಎಂಬ ಹಕ್ಕೊತ್ತಾಯ ಜಿಲ್ಲೆಯ ಹೊಸ ಶಾಸಕರು ಮಂಡಿಸಿದ್ದರೆ ಅದರಲ್ಲಿ ಆಶ್ವರ್ಯವೇನೂ ಇಲ್ಲ.
ನಮ್ಮದು ಕಾಂಗ್ರೆಸ್ ಬಣ ಅಷ್ಟೇ- ಕೋಳಿವಾಡ ಸ್ಪಷ್ಟನೆ
ಸಿಎಂ ಹಾಗೂ ಡಿಸಿಎಂ ಭೇಟಿ ಮಾಡಿ ಸಭೆ ನೆಸಿದ ಶಾಸಕರ ಪೈಕಿ ರಾಣೇಬೆನ್ನೂರು ಶಾಸಕ ಪ್ರಕಾಶ ಕೆ. ಕೋಳಿವಾಡ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ‘ನಮ್ಮದು ಆ ಬಣ-ಈ ಬಣ ಎನ್ನುವುದಿಲ್ಲ. ನಾವು ಯಾವುದಕ್ಕೂ ಸೇರಿಲ್ಲ; ನಮ್ಮದು ಕಾಂಗ್ರೆಸ್ ಬಣ ಅಷ್ಟೇ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಹೇಳಿಕೆ ಸಮಯೋಚಿತ ಆಗಿರುವುದರಿಂದ, ಇದು ಪಕ್ಷದ ಒಳಬಣಗಳ ಗೊಂದಲದ ನಡುವೆಯೇ ತಾವು ನಿಷ್ಠಾವಂತರಾಗಿರುವುದನ್ನು ತೋರಿಸುವ ಸೂಚನೆಯೋ? ಅಥವಾ ಮಂತ್ರಿಸ್ಥಾನ ಒತ್ತಡ ಹೆಚ್ಚಿಸಲು ನೀಡಿದ ರಾಜಕೀಯ ಸಂದೇಶವೋ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ.
ಅದೇ ಸಮಯದಲ್ಲಿ ಅವರು ‘ಹಾವೇರಿ ಜಿಲ್ಲೆಗೆ ಮಂತ್ರಿಸ್ಥಾನ ಅಗತ್ಯ, ಅದಕ್ಕಾಗಿ ಸಿಎಂ ಮತ್ತು ಡಿಸಿಎಂ ಇಬ್ಬರಿಗೂ ಒತ್ತಾಯಿಸಿದ್ದೇವೆ’ ಎಂದು ಬಹಿರಂಗವಾಗಿ ಹೇಳಿರುವುದು ಈ ಭೇಟಿಯ ಮೂಲ ಉದ್ದೇಶವನ್ನು ಮತ್ತಷ್ಟು ಸ್ಪಷ್ಟಪಡಿಸುತ್ತದೆ.

ಇದನ್ನೂ ಓದಿ: Honge Krushi- ಹಾವೇರಿ ರೈತರಿಗೆ ವರದಾನವಾಗುವ ಹೊಂಗೆ ಕೃಷಿ | ರಾಣೇಬೆನ್ನೂರು ಹನುಮನಮಟ್ಟಿ ಜೈವಿಕ ಇಂಧನ ಕೇಂದ್ರದ ಮಾಹಿತಿ
ದೆಹಲಿ ಲೈನ್ ಮತ್ತು ಹಾವೇರಿ ಚಲನೆ
ಶಿಗ್ಗಾವಿ ಶಾಸಕ ಯಾಸೀರ್ ಪಠಾಣ ಅವರ ಈ ಭೇಟಿಗೆ ವಿಶೇಷ ಗಮನ ಹರಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ಸಿಎಂ ಮತ್ತು ಡಿಸಿಎಂ ಇಬ್ಬರೂ ಶಿಗ್ಗಾವಿಯಲ್ಲಿ ಭರ್ಜರಿ ಪ್ರಚಾರ ನಡೆಸಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ತಂದುಕೊಟ್ಟಿದ್ದರು. ಈಗ ಅವರು ಮತ್ತೆ ಅದೇ ನಾಯಕರನ್ನು ಭೇಟಿ ಮಾಡಿರುವುದು, ಪ್ರದೇಶದ ಮತದಾರರು ಮತ್ತು ರಾಜಕೀಯ ಅಭಿಮಾನಿಗಳಲ್ಲಿ ಹೊಸ ಕುತೂಹಲ ಹುಟ್ಟುಹಾಕಿದೆ.
ದಿಲ್ಲಿ ಮಟ್ಟದಲ್ಲಿ ನಡೆಯುತ್ತಿರುವ ನಾಯಕತ್ವ ಸಮಾಲೋಚನೆಗಳ ಹಿನ್ನಲೆಯಲ್ಲಿ, ಕೆಲ ಶಾಸಕರು ದೆಹಲಿಗೂ ಹೋಗಿರುವ ಮಾಹಿತಿ ಹೊರಬಿದ್ದಿದೆ. ಇದಕ್ಕೆ ತಕ್ಕಂತೆ, ಹಾವೇರಿ ಶಾಸಕರ ಈ ದಿಢೀರ್ ಚಲನೆ ಯಾವುದೇ ಸಾಮಾನ್ಯ ಭೇಟಿಯಂತಿಲ್ಲ; ಬರುವ ದಿನಗಳಲ್ಲಿ ನಡೆಯಲಿರುವ ರಾಜಕೀಯ ನಿರ್ಧಾರಗಳಿಗೆ ಇದು ಮೊದಲ ಸೂಚನೆ ಎಂಬ ಅಂದಾಜಿಗೆ ಬಲ ನೀಡಿದೆ.
- ಮಾಲತೇಶ್ ಮಾಳಮ್ಮನವರ್

ಹಾವೇರಿ ಜಿಲ್ಲೆಯ ಸುದ್ದಿ, ಸರ್ಕಾರಿ ಯೋಜನೆಗಳು, ಅರ್ಜಿ ಪ್ರಕ್ರಿಯೆಗಳು, ರೈತರ ಉಪಯುಕ್ತ ಮಾಹಿತಿ ಮತ್ತು ಸ್ಥಳೀಯ ಅಪ್ಡೇಟ್ಗಳನ್ನು ನಿಖರ ಹಾಗೂ ಸರಳವಾಗಿ ಹಂಚುವ ಜಾಲತಾಣ
2 thoughts on “Haveri Three MLAs Secret Meeting- ಹಾವೇರಿ ಮೂವರು ಶಾಸಕರ ಡಿಕೆಶಿ ಭೇಟಿಯ ಹಕೀಕತ್ ಏನು? ಮಂತ್ರಿಗಿರಿಗಾಗಿ ಹಕ್ಕೊತ್ತಾಯ!”