ಸದ್ಯದಲ್ಲಿಯೇ ರಾಜ್ಯ ಸಚಿವ ಸಂಪುಟಕ್ಕೆ ಸರ್ಜರಿ ನಡೆಯಲಿದ್ದು; ಹಾವೇರಿ ಜಿಲ್ಲೆಯ ಶಾಸಕರ ಪೈಕಿ (Haveri Minister Candidate List) ಯಾರಿಗೆ ಒಲಿಯಲಿದೆ ಮಂತ್ರಿಭಾಗ್ಯ? ಎಂಬ ಕೌತುಕದ ಪ್ರಶ್ನೆ ಉದ್ಭವವಾಗಿದೆ. ಈ ಕುರಿತ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ…
ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನರ್ರಚನೆ ಹಾಗೂ ಅಧಿಕಾರ ಹಸ್ತಾಂತರದ ಚರ್ಚೆಗಳು ಬಿರುಸಾಗಿದೆ. ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಅನೇಕ ಶಾಸಕರು ಮಂತ್ರಿಗಿರಿಗಾಗಿ ಹಂಬಲಿಸತೊಡಗಿದ್ದಾರೆ.
ಹಾವೇರಿ ಜಿಲ್ಲೆಯಲ್ಲೂ ಇದೀಗ ಹಿರಿ-ಕಿರಿಯ ಶಾಸಕರಲ್ಲಿ ಮಂತ್ರಿಗಿರಿ ಆಸೆ ಮತ್ತೆ ಚಿಗುರೊಡೆಯುತ್ತಿದೆ. ಪಕ್ಷನಿಷ್ಠೆ, ಹಿರಿತನ, ಜಾತಿ ಸಮೀಕರಣ, ಪ್ರಾದೇಶಿಕ ಸಮತೋಲನ ಎಲ್ಲವನ್ನೂ ಲೆಕ್ಕಾಚಾರಕ್ಕೆ ತೆಗೆದುಕೊಂಡು ಈಗಿನಿಂದಲೇ ಜೋರು ಲಾಬಿ ಶುರು ಮಾಡಿದ್ದಾರೆ.
ಕೈ ಸರ್ಕಾರಕ್ಕೆ ಜಿಲ್ಲೆಯ ಆರು ಶಾಸಕರ ಬಲ
ಕಳೆದ ವಿಧಾನಸಭಾ ಚುನಾವಣೆ ಹಾಗೂ ಆನಂತರ ನಡೆದ ಹಾನಗಲ್ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಹಾವೇರಿ ಜಿಲ್ಲೆ ಬಲಿಷ್ಠ ಬೆಂಬಲ ನೀಡಿದೆ. ಒಂದು ಕಾಲದಲ್ಲಿ ಬಿಜೆಪಿ ಕೋಟೆಯಾಗಿದ್ದ ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಆರು ಕ್ಷೇತ್ರಗಳನ್ನೂ ಗೆದ್ದು ಹೊಸ ಇತಿಹಾಸ ನಿರ್ಮಿಸಿದೆ.
ಈ ಫಲಿತಾಂಶಕ್ಕೆ ಬಹುಮಾನವಾಗಿ ಈಗ್ಗೆ ಎರಡೂವರೆ ವರ್ಷಗಳ ಹಿಂದೆಯೇ ಜಿಲ್ಲೆಗೆ ಮಂತ್ರಿಗಿರಿ ಬರಬೇಕಿತ್ತು ಎಂಬ ಅಭಿಪ್ರಾಯ ಮೊದಲಿನಿಂದಲೂ ಕೇಳಿ ಬರುತ್ತಿದೆ. ಆದರೆ ಆ ಸಮಯದ ರಾಜಕೀಯ ಸಮೀಕರಣಗಳು, ಹೈಕಮಾಂಡ್ನ ಲೆಕ್ಕಾಚಾರಗಳೆಲ್ಲವೂ ಸೇರಿ ಮಂತ್ರಿಗಿರಿ ಜಿಲ್ಲೆಯ ಕೈ ತಪ್ಪಿದೆ.
ಈಗ ಮತ್ತೆ ಸರ್ಕಾರ ಅವಧಿಯ ಅರ್ಧ ಮಾರ್ಗ ತಲುಪಿರುವ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರದ ಕುರಿತ ಚರ್ಚೆಗಳು ಬಿರುಸು ಪಡೆದಿವೆ. ಜೊತೆಗೆ ಸಂಪುಟ ಪುನರ್ರಚನೆಯ ಸದ್ದು ಮತ್ತೆ ಕೇಳಿಬರುತ್ತಿದೆ. ಸಹಜವಾಗಿಯೇ ಹಾವೇರಿ ಜಿಲ್ಲೆಯ ಶಾಸಕರ ಮಂತ್ರಿಗಿರಿ ಕನಸೂ ಮತ್ತೆ ಜೀವಂತಗೊಂಡಿದೆ.
ಇದನ್ನೂ ಓದಿ: Haveri Hingaru Bele Vime – ಹಾವೇರಿ ಜಿಲ್ಲೆಯ ರೈತರಿಂದ ಹಿಂಗಾರು ಬೆಳೆವಿಮೆ ನೋಂದಣಿಗೆ ಅರ್ಜಿ ಆಹ್ವಾನ
ಸಿಎಂ-ಡಿಸಿಎಂ ಭೇಟಿಯ ಮರ್ಮವೇನು?
ಈ ರಾಜಕೀಯ ಚಟುವಟಿಕೆಗಳ ನಡುವೆಯೇ ಇತ್ತೀಚೆಗೆ ಜಿಲ್ಲೆಯ ಮೂವರು ಶಾಸಕರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರರನ್ನು ಪ್ರತ್ಯೇಕವಾಗಿ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ.
ಹಾನಗಲ್ ಶಾಸಕ ಶ್ರೀನಿವಾಸ ಮಾನೆ, ಶಿಗ್ಗಾಂವಿ ಶಾಸಕ ಯಾಸೀರ್ ಖಾನ್ ಪಠಾಣ ಹಾಗೂ ರಾಣೇಬೆನ್ನೂರು ಪ್ರಕಾಶ ಕೋಳಿವಾಡ ಮೂವರು ನಾಯಕರು ಒಬ್ಬೊಬ್ಬರಾಗಿ ಭೇಟಿ ಮಾಡಿದ್ದು ಕೌತುಕ ಹೆಚ್ಚಿಸಿದೆ. ತಾವು ಸಹಜ ಭೇಟಿಗೆ ಮಾತ್ರ ತೆರಳಿದ್ದೇವೆ ಎಂದು ಈ ನಾಯಕರು ಹೇಳಿದರೂ, ರಾಜಕೀಯದ ಒಳಮರ್ಮಗಳೇ ಬೇರೆ ಧ್ವನಿ ಮೊಳಗಿಸುತ್ತಿವೆ!
ಮಂತ್ರಿಗಿರಿಗೆ ‘ರೇಸ್’ನಲ್ಲಿರುವವರು ಯಾರು?
ಇದೀಗ ಹಾವೇರಿ ಜಿಲ್ಲೆಯಿಂದ ಮಂತ್ರಿಗಿರಿ ರೇಸ್ನಲ್ಲಿ ಪ್ರಮುಖವಾಗಿ ಮೂವರು ಹಿರಿಯ ಶಾಸಕರ ಹೆಸರುಗಳು ಬಲವಾಗಿ ಕೇಳಿ ಬರುತ್ತಿವೆ. ಈ ಮೂವರಲ್ಲಿ ‘ಮಂತ್ರಿಭಾಗ್ಯ’ ಯಾರಿಗೆ ಒಲಿಯಲಿದೆ ಎಂಬ ಕುತೂಹಲವೂ ಹೆಚ್ಚುತ್ತಿದೆ.
ರುದ್ರಪ್ಪ ಲಮಾಣಿ: ಅನುಭವದ ಬಲ, ಹೈಕಮಾಂಡ್ ಭರವಸೆ
ಹಾಲಿ ವಿಧಾನಸಭೆ ಉಪಾಧ್ಯಕ್ಷರಾಗಿರುವ ಹಾವೇರಿ ಮತಕ್ಷೇತ್ರದ ಶಾಸಕ ರುದ್ರಪ್ಪ ಲಮಾಣಿ ಅವರ ಹೆಸರು ಮೊದಲಿನಿಂದಲೂ ಬೆಂಗಳೂರಿನ ರಾಜಕೀಯ ವಲಯದಲ್ಲೇ ಕೇಳಿ ಬರುತ್ತಿದೆ.

ಈಗಾಗಲೇ ಮಂತ್ರಿಯಾಗಿ ಕೆಲಸ ಮಾಡಿದ ಅನುಭವ, ಬಂಜಾರ ಸಮುದಾಯದ ಏಕೈಕ ಶಾಸಕ ಎಂಬ ಅಂಶ ಮತ್ತು ಹಿಂದಿನ ಅವಧಿಯ ಹೈಕಮಾಂಡ್ ಭರವಸೆ ಎಲ್ಲವೂ ಅವರ ಪಾಲಿಗೆ ಪ್ಲಸ್ ಪಾಯಿಂಟ್. ಸಂಪುಟ ಪುನರ್ರಚನೆಯಾಗಿದರೆ ಲಮಾಣಿ ಅವರಿಗೆ ಅವಕಾಶ ಸಿಕ್ಕರೆ ಅಚ್ಚರಿಯೆನಿಲ್ಲ.
ಇದನ್ನೂ ಓದಿ: Haveri Three MLAs Secret Meeting- ಹಾವೇರಿ ಮೂವರು ಶಾಸಕರ ಡಿಕೆಶಿ ಭೇಟಿಯ ಹಕೀಕತ್ ಏನು? ಮಂತ್ರಿಗಿರಿಗಾಗಿ ಹಕ್ಕೊತ್ತಾಯ!
ಬಸವರಾಜ ಶಿವಣ್ಣನವರ್: ಹಿರಿಯತನ, ಸಮುದಾಯ ಬಲ
ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ್ ಅವರಿಗೂ ಮಂತ್ರಿಗಿರಿಯ ಆಸೆ ಹೊಸದಲ್ಲ. ಜನತಾದಳ ಸರ್ಕಾರವಿದ್ದಾಗಲೇ ಮಂತ್ರಿಯಾಗಿದ್ದ ಇವರಿಗೆ ನಂತರ ಮತ್ತೆ ಅವಕಾಶ ಸಿಕ್ಕಿರಲಿಲ್ಲ.

ಕುರುಬ ಸಮುದಾಯಕ್ಕೆ ಉತ್ತರ ಕರ್ನಾಟಕದಿಂದ ಪ್ರತಿನಿಧಿಯನ್ನು ನೀಡಬೇಕು ಎಂಬ ಒತ್ತಾಯ ಈಗ ಹೆಚ್ಚಾಗಿದೆ. ಹಿರಿಯತನ ಮತ್ತು ಅನುಭವದ ಅಂಶ ಹೊಂದಿರುವ ಶಿವಣ್ಣನವರ್ ಈಗ ಮರು ಅವಕಾಶಕ್ಕಾಗಿ ಬಲವಾಗಿ ಪ್ರಯತ್ನಿಸುತ್ತಿದ್ದಾರೆ.
ಸಲೀಂ ಅಹ್ಮದ್: ಸಂಘಟನಾ ಶಕ್ತಿ, ಪಕ್ಷ ನಿಷ್ಠೆ
ಇನ್ನು ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾಗಿರುವ ಸಲೀಂ ಅಹ್ಮದ್ ಕಾಂಗ್ರೆಸ್ ಸಂಘಟನೆಯ ಅತ್ಯಂತ ವಿಶ್ವಾಸಾರ್ಹ ನಾಯಕರೆಂದೇ ಪ್ರಖ್ಯಾತರು. ಕಳೆದ ಅವಧಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದವರು.

ಸಿದ್ದರಾಮಯ್ಯ ಕ್ಯಾಬಿನೆಟ್ನಲ್ಲಿ ಅವರ ಸಹೋದ್ಯೋಗಿಗಳು ಮಂತ್ರಿಗಳಾಗಿದ್ದರೂ, ಪರಿಷತ್ ಸದಸ್ಯ ಎಂಬ ಕಾರಣಕ್ಕೆ ಇವರಿಗೆ ಅವಕಾಶ ಸಿಗಲಿಲ್ಲ. ಈ ಬಾರಿ ಹೈಕಮಾಂಡ್ ಅವರ ನಿಷ್ಠೆಗೆ ಮಂತ್ರಿಗಿರಿ ನೀಡಬಹುದು ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.
ಶ್ರೀನಿವಾಸ ಮಾನೆ: ಯುವ ನಾಯಕತ್ವದ ಬಲಿಷ್ಠ ಮುಖ
ಹಾನಗಲ್ ಉಪಚುನಾವಣೆಯಲ್ಲಿ ಪಕ್ಷಕ್ಕೆ ಬೂಸ್ಟ್ ನೀಡಿ, ಬಳಿಕ ಸಾರ್ವತ್ರಿಕ ಚುನಾವಣೆಯಲ್ಲೂ ಭರ್ಜರಿ ಗೆಲುವು ಕಂಡಿದ್ದು ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಅವರಿಗೆ ಪ್ಲಸ್ ಪಾಯಿಂಟ್.

ಕಳೆದ ಎರಡು ಅವಧಿಯಲ್ಲಿ ಪರಿಷತ್ ಸದಸ್ಯರಾಗಿದ್ದ ಅನುಭವ, ಯುವ ನಾಯಕತ್ವದ ಪ್ರಭಾವ ಕೂಡ ಇವರಿಗೆ ಬಲ ನೀಡುತ್ತಿದೆ. ಹೀಗಾಗಿ ಪಕ್ಷದ ಒಳಗಿನವರು ಮಾನೆ ಈಗ ಸಂಪುಟ ಸೇರುವ ಮಟ್ಟದ ಬೆಂಬಲವನ್ನು ಗಳಿಸಿದ್ದಾರೆ ಎಂದು ಹೇಳುತ್ತಿರುವುದು ಸಾಮಾನ್ಯವಾಗಿದೆ.
ಇದನ್ನೂ ಓದಿ: Haveri Hori Habba- ಹೋರಿ ಹಬ್ಬಕ್ಕೆ ಬ್ರೇಕ್ | ಬ್ಯಾನ್ ಆಗುತ್ತಾ ಕ್ರೇಜಿ ಹಬ್ಬ? | ಹಾವೇರಿ ಜಿಲ್ಲಾಡಳಿತದ ಷರತ್ತುಗಳೇನು?
ಉಳಿದವರ ಕತೆ ಏನು?
ಜಿಲ್ಲೆಯ ಇನ್ನೂ ಮೂವರು ಶಾಸಕರಾದ ಪ್ರಕಾಶ ಕೋಳಿವಾಡ, ಯಾಸೀರ್ ಖಾನ್ ಪಠಾಣ ಮತ್ತು ಯು.ಬಿ. ಬಣಕಾರ ಮೊದಲ ಬಾರಿಗೆ ಗೆದ್ದವರು ಅಥವಾ ಇತ್ತೀಚೆಗೆ ಪಕ್ಷಾಂತರ ಮಾಡಿದವರು. ಅವರಲ್ಲಿ ಮಂತ್ರಿಗಿರಿಯ ಆಸೆ ಇದ್ದರೂ, ಈ ಹಂತದಲ್ಲಿ ಅವಕಾಶ ಸಿಗುವುದು ಕಡಿಮೆ ಎಂಬ ಅಭಿಪ್ರಾಯವಿದೆ.
ಜಿಲ್ಲೆಯವರೊಬ್ಬರು ಮಂತ್ರಿಯಾಗಲಿ- ಕಾರ್ಯಕರ್ತರ ಒತ್ತಾಯ
ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ. ಆದರೆ ಉಸ್ತುವಾರಿ ಸಚಿವ ಮಾತ್ರ ಬೇರೆ ಜಿಲ್ಲೆಯವರು. ಈ ವಿಷಯ ಪಕ್ಷದ ಹಲವು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ನಮ್ಮ ಜಿಲ್ಲೆಯವರೇ ಉಸ್ತುವಾರಿ ಮಂತ್ರಿಯಾಗಬೇಕು. ನಮ್ಮ ಸಮಸ್ಯೆಯನ್ನು ನಮ್ಮ ಶಾಸಕರಿಗಿಂತ ಯಾರು ಚೆನ್ನಾಗಿ ಅರಿತಿರುತ್ತಾರೆ? ಎಂಬ ಮಾತುಗಳು ಗ್ರಾಮ ಮತ್ತು ತಾಲೂಕ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಏಕೆಂದರೆ ಮಂತ್ರಿಯಿಲ್ಲದ ಜಿಲ್ಲೆಗೆ ಇಲಾಖೆ ಮಟ್ಟದಲ್ಲಿ ಪ್ರಾತಿನಿಧ್ಯ ಕಡಿಮೆ. ಯೋಜನೆಗಳ ಅನುಷ್ಠಾನ ವೇಗ ಕುಂಠಿತವಾಗುತ್ತದೆ ಎನ್ನುವುದು ಕಾರ್ಯಕರ್ತರ ವಾದ.
ಕೊನೆಗೂ ಯಾರಿಗೆ ಸಿಗಲಿದೆ ಮಂತ್ರಿಗಿರಿ?
ಏನೇ ಹಂಬಲ, ರಾಜಕೀಯ ಲೆಕ್ಕಾಚಾರಗಳಿದ್ದರೂ ರಾಜಕೀಯದಲ್ಲಿ ಅಂತಿಮ ನಿರ್ಧಾರ ಹೈಕಮಾಂಡ್ ಕೈಯಲ್ಲಿದೆ. ಆದರೆ ಹಾವೇರಿ ಜಿಲ್ಲೆಯ ಜನ ‘ಈ ಬಾರಿಯಾದರೂ ನಮ್ಮ ಜಿಲ್ಲೆಯ ಒಬ್ಬ ಶಾಸಕರಿಗೆ ಮಂತ್ರಿಗಿರಿ ಸಿಗಬೇಕು’ ಎಂದು ಹಂಬಲಿಸುತ್ತಿದ್ದಾರೆ.
ರಾಜಕೀಯ ಚರ್ಚೆಗಳು ಮುಂದಿನ ವಾರಗಳಲ್ಲಿ ಇನ್ನಷ್ಟು ಬಿರುಸು ಪಡೆಯಲಿದೆ. ಅಧಿಕಾರ ಹಂಸ್ತಾರವಾಗದಿದ್ದರೂ ಸಂಪುಟ ಸರ್ಜರಿಯಂತೂ ಖಚಿತ. ಹಾವೇರಿ ಜಿಲ್ಲೆಯ ಶಾಸಕರಲ್ಲಿ ಯಾರಿಗೆ ಮಂತ್ರಿಗಿರಿ ಒಲಿಯಲಿದೆ? ಎಂಬ ಕೌತುಕದ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.

ಹಾವೇರಿ ಜಿಲ್ಲೆಯ ಸುದ್ದಿ, ಸರ್ಕಾರಿ ಯೋಜನೆಗಳು, ಅರ್ಜಿ ಪ್ರಕ್ರಿಯೆಗಳು, ರೈತರ ಉಪಯುಕ್ತ ಮಾಹಿತಿ ಮತ್ತು ಸ್ಥಳೀಯ ಅಪ್ಡೇಟ್ಗಳನ್ನು ನಿಖರ ಹಾಗೂ ಸರಳವಾಗಿ ಹಂಚುವ ಜಾಲತಾಣ
2 thoughts on “Haveri Minister Candidate List- ಹಾವೇರಿ ಜಿಲ್ಲೆಯ ಶಾಸಕರಲ್ಲಿ ಯಾರಿಗೆ ಒಲಿಯಲಿದೆ ಮಂತ್ರಿ ಭಾಗ್ಯ?”